ಕೇನ್ ಥಾಮಸ್ ಹೆನ್ರಿ ಹಾಲ್
1853-1931. ಇಂಗ್ಲೀಷ್ ಕಾದಂಬರಿಕಾರ. ಚೆಷೈರಿನ ರನ್‍ಕಾರ್‍ನಲ್ಲಿ ಹುಟ್ಟಿದ. ಈತನ ವಿದ್ಯಾಭ್ಯಾಸ ಐಲ್ ಆಫ್ ಮ್ಯಾನ್ ದ್ವೀಪದಲ್ಲೂ ಲಿವರ್‍ಪೂಲ್‍ನಲ್ಲೂ ನಡೆಯಿತು. ಶಿಲ್ಪಶಾಸ್ತ್ರಜ್ಞನ ಗುಮಾಸ್ತನಾಗಿಯೂ ಕೆಲಕಾಲ ಉಪಾಧ್ಯಾಯನಾಗಿಯೂ ಇದ್ದು ಬಿಡವಿನ ವೇಳೆಯಲ್ಲಿ ಪತ್ರಿಕೋದ್ಯಮವನ್ನು ಈತ ಅಭ್ಯಾಸ ಮಾಡಿದ. ಇಪ್ಪತ್ತೈದನೆಯ ವಯಸ್ಸಿನಲ್ಲಿ ಡಿ.ಜಿ. ರೊeóÉಟಿಂiÀi ಕಾರ್ಯದರ್ಶಿಯಾಗಿ ಕೆಲಸ ಮಾಡಿದ. ಈತನ ರಿಕಲೆಕ್ಷನ್ಸ್ ಆಫ್ ರೊಜೆಟಿ ಎಂಬ ಗ್ರಂಥ 1882ರಲ್ಲಿ ಪ್ರಕಟವಾಯಿತು. ದಿ ಷ್ಯಾಡೋ ಆಫ್ ಎ ಕ್ರೈಂ (1885) ಈತನ ಮೊದಲ ಕಾದಂಬರಿ. 1887ರಲ್ಲಿ ಡೀಮ್‍ಸ್ಟರ್ ಬಂತು. ಅನಂತರ ಅದು ನಾಟಕವಾಗಿಯೂ ಪರಿವರ್ತನೆಗೊಂಡು ಕೇನನಿಗೆ ಅಪಾರ ಖ್ಯಾತಿ ಹಾಗೂ ಹಣವನ್ನು ಕೊಟ್ಟಿತು. 1918ರಲ್ಲಿ ನೈಟ್ ಪದವಿಯೂ 1922ರಲ್ಲಿ ಕಂಪ್ಯಾನಿಯನ್ ಆಫ್ ಆನರ್ ಪ್ರಶಸ್ತಿಯೂ ಈತನಿಗೆ ಲಭಿಸಿದವು. ದಿ ಬಾಂಡ್‍ಮನ್ (1890), ದಿ ಮ್ಯಾಂಕ್ಸ್‍ಮನ್ (1894), ದಿ ಇಟರ್ನಲ್ ಸಿಟಿ (1901), ದಿ ಪ್ರಾಡಿಕಲ್ ಸನ್ (1904) ಇವು ಈತನ ಇತರ ಖ್ಯಾತ ಕಾದಂಬರಿಗಳು. ಮೈ ಸ್ಟೋರಿ (1908) ಎಂಬುದು ಈತನ ಜೀವನದ ಪೂರ್ವಭಾಗವನ್ನೊಳಗೊಂಡ ಆತ್ಮ ಕಥೆ. 1893ರಲ್ಲೇ ಈತ ಬರೆಯಲು ಮೊದಲು ಮಾಡಿದ ಯೇಸು ಜೀವನ ವೃತ್ತಾಂತ ಈತ ಸತ್ತ ಮೇಲೆ 1938ರಲ್ಲಿ ಪ್ರಕಟವಾಯಿತು.       								
 (ಎಚ್.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ